ಫ್ಲೆಮಿಂಗೋ

	ಸಿಕೋನೈಯಿಫಾರ್ಮೀಸ್ ಗಣದ ಫೀನಿಕಾಪ್ಟರಿಡೀ ಕುಟುಂಬಕ್ಕೆ ಸೇರಿದ ಸುಂದರ ಪಕ್ಷಿ. ಪಕ್ಷಿವರ್ಗೀಕರಣ ತಜ್ಞರಿಗೆ ಫ್ಲೆಮಿಂಗೋ ಹಕ್ಕಿಯ ವಗೀಕರಣ ಸವಾಲಾಗಿತ್ತು. ಕೆಲವರು ಇದನ್ನು ಬಾತುಗಳೊಂದಿಗೆ ಸೇರಿಸುವರಾದರೆ ಇನ್ನು ಕೆಲವರು ಇದನ್ನು ಕೋಳಿಗಳ ಸಂಬಂಧಿ ಎಂದು ಬಗೆಯುತ್ತಾರೆ. ಮತ್ತೆ ಕೆಲವರ ಪ್ರಕಾರ ಇದು ಕೊಕ್ಕರೆ, ಕಬ್ಬಾರೆ, ಐಬಿಸುಗಳಿಗೆ ಹೆಚ್ಚು ಹತ್ತಿರವಾಗಿದೆ.

ಇದರಲ್ಲಿ ನಾಲ್ಕು ಪ್ರಭೇದಗಳುಂಟು: 1 ಫೀನಿಕಾಪ್ಟರಸ್ ರೂಬರ್ (ಗ್ರೇಟರ್ ಫ್ಲೆಮಿಂಗೋ)-ಪೂರ್ವ ಆಫ್ರಿಕ, ಪಶ್ಚಿಮ ಭಾರತ (ಕಚ್ ಪ್ರದೇಶ), ವೆಸ್ಟ್ ಇಂಡೀಸ್, ಗಲಾಪಗಸ್ ದ್ವೀಪಗಳು, ದಕ್ಷಿಣ ಅಮೆರಿಕದ ಪೆರುವಿನಿಂದ ಟಿಯೆರ ಡ ಫೋಯೆಗೊ ವರೆಗಿನ ಪ್ರದೇಶಗಳಲ್ಲಿ ವಾಸಿಸುತ್ತದೆ. 2 ಲೆಸರ್ ಫ್ಲೆಮಿಂಗೋ ಆಫ್ರಿಕದಲ್ಲಿ ಮಾತ್ರ ಕಾಣಸಿಗುತ್ತದೆ. 3 ಇಂಡಿಯನ್ ಫ್ಲೆಮಿಂಗೋ ಮತ್ತು 4 ಜೇಮ್ಸ್ ಫ್ಲೆಮಿಂಗೋ-ಇವೆರಡೂ ಪೆರು, ಬೊಲೀವಿಯ ಮತ್ತು ಚಿಲಿ ದೇಶಗಳಲ್ಲಿ ಆಂಡೀಸ್ ಪರ್ವತಪ್ರದೇಶಗಳಲ್ಲಿ ಕಾಣದೊರೆಯುತ್ತವೆ.
ಫ್ಲೆಮಿಂಗೋ ದೊಡ್ಡ ಗಾತ್ರದ ಹಕ್ಕಿ. ಇದರ ಎತ್ತರ ಸುಮಾರು 1.3 ಮೀ, ದೇಹದ ಗಾತ್ರಕ್ಕೆ ಹೋಲಿಸಿದರೆ ಬೇರಾವುದೇ ಹಕ್ಕಿಗಳಲ್ಲಿರುವುದಕ್ಕಿಂತ ಹೆಚ್ಚು ಉದ್ದದ ಕತ್ತು ಹಾಗೂ ಕಾಲುಗಳನ್ನೂ ಇದು ಪಡೆದಿದೆ. ಕಾಲಿನ ಮೂರು ಬೆರಳುಗಳನ್ನು ಒಳಗೊಂಡಿರುವಂತೆ ಜಾಲಪಾದವುಂಟು. ಮೊದಲೆರಡು ಪ್ರಭೇದಗಳಲ್ಲಿ ನಾಲ್ಕನೆಯ ಹಿಂಬೆರಳು ಇದೆಯಾದರೂ ಉಳಿದೆರಡರಲ್ಲಿ ಈ ಬೆರಳು ಇಲ್ಲ.

ಫ್ಲೆಮಿಂಗೋವಿನ ಕೊಕ್ಕು ಬಲು ವಿಚಿತ್ರ ಬಗೆಯದು. ಹಕ್ಕಿಯ ಆಹಾರ ಸೇವನೆಯೂ ವಿಚಿತ್ರವೇ. ಅದಕ್ಕೆ ತಕ್ಕಂತೆ ಕೊಕ್ಕು ಮಾರ್ಪಾಟಾಗಿದೆ. ತನ್ನ ಆಹಾರವಾದ ಸಣ್ಣ ಪುಟ್ಟ ಜಲಪ್ರಾಣಿ ಸಸ್ಯಗಳನ್ನು ಸೇವಿಸುವಾಗ ತನ್ನ ಕೊಕ್ಕಿನ ಮೇಲುದವಡೆ ಕೆಳಮುಖವಾಗಿರುವಂತೆ ಕತ್ತು ತಲೆಗಳನ್ನು ಬಾಗಿಸಿ, ನೀರು ಕೆಸರುಗಳನ್ನು ಸೀಳಿ ಜರಡಿಯಾಡಿಸಿದಂತೆ ಚಲಿಸುತ್ತದೆ.
ಕರಾವಳಿ ಪ್ರದೇಶ ಇದರ ಮೆಚ್ಚಿನ ತಾಣ. 12-45 ಸೆಂಮೀ ಎತ್ತರದ ಮಣ್ಣಿನ ಗುಡ್ಡೆಗಳನ್ನು ರಚಿಸಿ ಅದರ ಮೇಲೆ ಮೊಟ್ಟೆಯಿಡುವುದು ಇದರ ಇನ್ನೊಂದು ವಿಚಿತ್ರ ಸ್ವಭಾವ. ಈ ಗುಡ್ಡೆಗಳ ಮೇಲ್ಭಾಗ ಒಂದು ತೆರನ ಬಟ್ಟಲಿನಂತಿದ್ದು ಅದರೊಳಗೆ ಒಂದೇ ಮೊಟ್ಟೆಯಿಡುತ್ತದೆ. ಗಂಡು ಹೆಣ್ಣುಗಳೆರಡೂ ಕಾವು ಕೂತು ಮರಿಮಾಡುತ್ತವೆ, ಮೊಟ್ಟೆಯೊಡೆದು ಹೊರಬಂದಮರಿಗಳು 3-4 ದಿನಗಳಲ್ಲಿ ಗೂಡಿನಿಂದ ನೆಗೆದು ಕೆಳಗಿಳಿದು ಆಹಾರ ಸೇವನೆಗೆಂದು ಹೊರಡುತ್ತವೆ. ಇವು ತುಂಬ ಚೆನ್ನಾಗಿ ಈಜಬಲ್ಲವು. ನೋಡಲು ಹೆಚ್ಚುಕಡಿಮೆ ಬಾತಿನ ಮರಿಗಳಂತಿವೆ.

ಫ್ಲೆಮಿಂಗೋವನ್ನು ರೋಮನರ ಕಾಲದಲ್ಲಿ ಮಾಂಸಕ್ಕಾಗಿ ಬೇಟೆಯಾಡುತ್ತಿದ್ದರು. ಈಗ ಪುಕ್ಕಕ್ಕಾಗಿ ಮಾತ್ರ ಇದರ ಬೇಟೆಯಾಡುವುದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ